ಪೊಗೆನ್‍ಡಾರ್ಫ್, ಯೋಹನ್ ಕ್ರಿಸ್ಟಿಯನ್
1796-1877.  ಜರ್ಮನಿಯ ಭೌತ ಹಾಗೂ ರಸಾಯನ ವಿಜ್ಞಾನಿ.  1796 ಡಿಸೆಂಬರ್ 29ರಂದು ಜನಿಸಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು 1834ರಲ್ಲಿ ಅದೇ ವಿಶ್ವವಿದ್ಯಾಲಯದಲ್ಲಿ ರಸಾಯನವಿಜ್ಞಾನದ ಪ್ರಾಚಾರ್ಯನಾದ.  ಭೌತ ವಿಜ್ಞಾನದ ಮೂರು ಕ್ಷೇತ್ರಗಳಲ್ಲಿ ಸತತವಾಗಿ ಕೆಲಸ ಮಾಡಿದ: ಪ್ರಯೋಗ, ಸಂಶೋಧನ ಪತ್ರಿಕೆಯ ಸಂಪಾದಕತ್ವ, ಭೌತವಿಜ್ಞಾನದ ಇತಿಹಾಸ.  ತನ್ನ ಸಂಶೋಧನೆಗೆ ಉಪಯುಕ್ತವಾಗುವಂತೆ ಈತ ಉತ್ತಮ ಪ್ರಯೋಗಗಳನ್ನು ರೂಪಿಸಿದ.  ಅನಾಲೆನ್ ಡೆರ್ ಫಿಸಿಕ್ ಉಂಟ್ ಕೆಮೀ ಎಂಬ ಪತ್ರಿಕೆಯ ಸಂಪಾದಕನಾಗಿ 52 ವರ್ಷಗಳ ಕಾಲ ಕೆಲಸ ಮಾಡಿ 160 ಪುಸ್ತಕಗಳನ್ನು ಪ್ರಕಟಿಸಿದ.  ಈ ಪುಸ್ತಕಗಳಿಗಾಗಿ ಮೊದಲ ದರ್ಜೆಯ ಲೇಖನಗಳನ್ನು ದೊರಕಿಸಿದ ಮಾತ್ರವಲ್ಲ.  ಪ್ರಮುಖ ಪಾರಿಭಾಷಿಕ ಲೇಖನಗಳ ಭಾಷಾಂತರಗಳನ್ನು ಕೂಡ ಒದಗಿಸಿದ.  ಪ್ರಯೋಗಾಧಾರಿತ ಲೇಖನಗಳಿಗೆ ಈತ ಹೆಚ್ಚು ಆದ್ಯತೆ ಕೊಟ್ಟಿದ್ದ.

	ಪೊಗೆನ್‍ಡಾರ್ಫನಿಗೆ ಭೌತವಿಜ್ಞಾನದ ಚರಿತ್ರೆಯಲ್ಲಿ ಹೆಚ್ಚು ಆಸಕ್ತಿ ಇತ್ತು.  ಪೊಗೆನ್‍ಡಾರ್ಫ್ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿರುವ ವಿಜ್ಞಾನಿ-ಗ್ರಂಥಸೂಚಿ-ಜೀವನ ಚಿತ್ರ ಗ್ರಂಥವನ್ನು ತಯಾರಿಸಿ ಪ್ರಕಟಿಸಿದ.  1858ರ ತನಕದ ಸಮಸ್ತ ದೇಶಗಳ 8,400 ವಿಜ್ಞಾನಸಂಶೋಧಕರ ಕಾಲ ಮತ್ತು ಗ್ರಂಥಸೂಚಿಗಳನ್ನು ಒಳಗೊಂಡ ಎರಡು ಗ್ರಂಥಗಳನ್ನು 1863ರಲ್ಲಿ ಪ್ರಕಟಿಸಿದ.  1874ರ ವೇಳೆಗೆ ಹದಿನೆಂಟು ಸ್ವಂತ ಗ್ರಂಥಗಳನ್ನು ಕೂಡ ಬೆಳಕಿಗೆ ತಂದಿದ್ದ.

	1820 ರಲ್ಲಿ ಗ್ಯಾಲ್ವನಾಸ್ಕೋಪನ್ನು ನಿರ್ಮಿಸಿ, ಮುಂದೆ 1826ರಲ್ಲಿ, ಬೆಳಕಿನ ಪ್ರತಿಫಲನದಿಂದ ಅಳೆಯುವ ಜೋಡಣೆಯನ್ನು ಕೊಟ್ಟು ಅದರ ಸೂಕ್ಷ್ಮತೆಯನ್ನು ಹೆಚ್ಚಿಸಿದ.

	ಪ್ರಾಯೋಗಿಕ ಭೌತವಿಜ್ಞಾನದಲ್ಲಿ ಪೊಗೆನ್‍ಡಾರ್ಫನ ಕೊಡುಗೆ ಮಹತ್ತ್ವಪೂರ್ಣವಾದುದು.  ಇಂದಿಗೂ ಬಳಕೆಯಲ್ಲಿರುವ ಪೊಗೆನ್‍ಡಾರ್ಫ್ ಹೋಲಿಕೆ ವಿಧಾನದಿಂದಲೇ ವಿದ್ಯುತ್‍ಕೋಶದ ಎಲೆಕ್ಟ್ರೋಮೋಟಿವ್ ಶಕ್ತಿಯನ್ನು ನಿಖರವಾಗಿ ಅಳೆಯುವುದಾಗಿದೆ.  ಇದು ಪ್ರವಾಹರಹಿತ ಎಲೆಕ್ಟ್ರೋಮೋಟಿವ್ ಶಕ್ತಿಯನ್ನು ಅಳೆಯುವ ವಿಧಾನ.  ಬೆಳ್ಳಿಯ ವಿದ್ಯುದ್ವಿಭಜನಾಮಾಪಕ, ಸಪಾಶ್ರ್ವೀಕರಣ ಅಧ್ಯಯನದಲ್ಲಿ ಉಪಯುಕ್ತವಾಗುವ ವಿದ್ಯುತ್ ತ್ರಾಸು, ಗ್ಯಾಲ್ವಾನಾಮೀಟರಿನ್ ಸುಧಾರಣೆ ಉಷ್ಣತಾಂತರ ಯುಗ್ಮಗಳು ಅಟ್ವುಡನ ಯಂತ್ರ ಇನ್ನಿತರ ಉಪಕರಣಗಳನ್ನು ರಚಿಸಿದ.  ಕಾಂತವಿದ್ಯುತ್ ಪ್ರವಾಹದಲ್ಲಿ ಪೆಲ್ಟ್ಯೇ ಪರಿಣಾಮವಿರುವುದನ್ನು ಪ್ರಾಯೋಗಿಕವಾಗಿ ತೋರಿಸಿದ.  ವೋಲ್ಟಾಯಿಕ್ ವಿದ್ಯುತ್‍ಕೋಶದ ಕ್ರಿಯೆಗೆ ವೋಲ್ಟ್ ಕೊಟ್ಟ ವಿವರಣೆಯನ್ನು ಪೊಗೆನ್‍ಡಾರ್ಫ್ ಸ್ಪರ್ಶವಾದದಿಂದ ಪುಷ್ಟೀಕರಿಸಿದ.  ವೋಲ್ಟಾಯಿಕ್ ವಿದ್ಯುತ್‍ಕೋಶದ ಕ್ರಿಯೆಗೆ ವೋಲ್ಟ್ ಕೊಟ್ಟ ವಿವರಣೆಯನ್ನು ಪೊಗೆನ್‍ಡಾರ್ಫ್ ಸ್ಮರ್ಶವಾದದಿಂದ ಪುಷ್ಟೀಕರಿಸಿದ.  ವೋಲ್ಟಾಯಿಕ್ ವಿದ್ಯುತ್‍ಕೋಶದ ಎಲೆಕ್ಟ್ರೋಮೋಟಿವ್ ಶಕ್ತಿ ಒಂದೇ ಮೊತ್ತದಲ್ಲಿ ಇರುವುದಿಲ್ಲವಾದ ಕಾರಣ ಓಮನ ನಿಯಮಕ್ಕೆ ಸಂಬಂಧಿಸಿದ ಪ್ರಯೋಗಗಳಿಗಾಗಿ ಉಷ್ಣ ವಿದ್ಯುತ್ ಪ್ರವಾಹದ ಉಪಯೋಗವನ್ನು ಸೂಚಿಸಿದ.  1877 ಜನವರಿ 24 ರಂದು ಗತಿಸಿದ.
(ವಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ